ಜಾನಪದ -
ಸಾಮೂಹಿಕ ಸೃಷ್ಟಿಯಾಗಿ, ಕಂಠಪಾಠ ಸಂಪ್ರದಾಯದಲ್ಲಿ ತಲೆಮಾರಿನಿಂದ ತಲೆಮಾರಿಗೆ ಕೊಡುಗೆಯಾಗಿ ಬರುವ ಕಥೆ, ಗೀತೆ, ಒಗಟು, ಗಾದೆ, ಐತಿಹ್ಯ, ಪುರಾಣ, ನಂಬಿಕೆ, ಮೂಢನಂಬಿಕೆ, ಆಚಾರ, ಹಬ್ಬ, ಮಂತ್ರವಿದ್ಯೆ, ಕುಶಲ ಕೈಗಾರಿಕೆ, ವೈದ್ಯ ಇತ್ಯಾದಿಗಳು ಜಾನಪದ (ಫೋಕ್‍ಲೋರ್) ಎನಿಸಿಕೊಳ್ಳುವುವು. ಕ್ರಿ.ಶ. 1846ರಲ್ಲಿ ವಿಲಿಯಂ ಜಾನ್ ಥಾಂಸ್ ಎಂಬಾತ ಫೋಕ್‍ಲೋರ್ ಎಂಬ ಪದವನ್ನು ಸೃಷ್ಟಿಸಿ ಬಳಕೆಗೆ ತಂದ. ಮಾನವ ಸಮಾಜದ ಎಲ್ಲ ತರಹದ ವರ್ಗಗಳಲ್ಲೂ ಜಾನಪದವಿರುತ್ತದೆ. ಜೋನಾಸ್ ಬ್ಯಾಲಿಸ್ ಎಂಬ ವಿದ್ವಾಂಸ ಆದಿವಾಸಿ ಮತ್ತು ನಾಗರಿಕ ಸಮಾಜಗಳು ಸಾಂಪ್ರದಾಯಿಕವಾಗಿ ಸೃಷ್ಟಿಸಿ, ಉಳಿಸಿಕೊಂಡು ಬರುವ ಅಂಶಗಳನ್ನು ಜಾನಪದ ಒಳಗೊಂಡಿರುತ್ತದೆ ಎನ್ನುತ್ತಾನೆ. ಆತನ ಅಭಿಪ್ರಾಯದಲ್ಲಿ ಈ ಸಮಾಜಗಳ ಸಾಹಿತ್ಯಿಕ ಮತ್ತು ಭೌತಿಕ ಸಂಪ್ರದಾಯಗಳೆಲ್ಲ ಜಾನಪದವೇ. ಆದರೆ ಈ ಎರಡೂ ಸಮಾಜಗಳಲ್ಲೂ ಉಳಿದು ಬರುವ ಸಂಪ್ರದಾಯಗಳು ತಮ್ಮ ಸ್ವರೂಪಗಳಲ್ಲಿ ಬಹಳಷ್ಟು ವ್ಯತ್ಯಾಸವನ್ನು ಹೊಂದಿರುತ್ತವೆ. ಅನಕ್ಷರಸ್ಥ ಸಮಾಜದಲ್ಲಿ, ಕಂಠಪಾಠ ಸಂಪ್ರದಾಯದ ಮೂಲಕ ಉಳಿದುಬರುವ ಸಾಹಿತ್ಯಿಕ ಭೌತಿಕ ವರ್ಗಗಳು ತಮ್ಮ ಜಾನಪದದ ಅಂಶಗಳಿಂದಾಗಿ ನಾಗರಿಕ ಸಮಾಜದವಕ್ಕಿಂತ ಹೆಚ್ಚು ಶ್ರೀಮಂತವಾಗಿರುತ್ತವೆ. ಅನಕ್ಷರಸ್ಥ ಸಮಾಜದ ಜಾನಪದದಲ್ಲಿ ಮಾನವನ ಮೂಲಭೂತ ಅನಿಸಿಕೆಗಳನ್ನು ಹೆಚ್ಚು ಹೆಚ್ಚಾಗಿ ಹೆಕ್ಕುವುದಕ್ಕೆ ಅವಕಾಶವಿರುತ್ತದೆ. ಮನುಷ್ಯನ ಹುಟ್ಟು, ಬಾಲ್ಯ, ಯೌವನ, ಮದುವೆ ಮತ್ತು ಸಾವು ಇವುಗಳಲ್ಲೆಲ್ಲ ವ್ಯಕ್ತಿಯೊಬ್ಬನ ವೈಯಕ್ತಿಕ ಅನಿಸಿಕೆಗಳಿದ್ದು ಅವು ಅವನ ಹತ್ತಿರದ ಸಮಾಜದೊಂದಿಗೆ ತಮ್ಮ ನಿಕಟ ಸಂಬಂಧವನ್ನು ಹೊಂದಿರುತ್ತವೆ. ಒಬ್ಬ ನಾಗರಿಕ ತನ್ನ ಹತ್ತಿರದ ಸಮಾಜದಲ್ಲಿರುವ ಅಶಿಕ್ಷಿತ ಮತ್ತು ಅನಕ್ಷರಸ್ಥ ಸಮಾಜದ ವ್ಯಕ್ತಿಗಳೊಂದಿಗೆ ತನ್ನ ವೈಯಕ್ತಿಕ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾನೆ. ಹೀಗೆ ಒಟ್ಟು ಸಮಾಜದಲ್ಲಿ ಅವನ ಭಾಗವಹಿಸುವಿಕೆ ಇರುತ್ತದೆ. ಆಗ ಅಶಿಕ್ಷಿತ ಮತ್ತು ಅನಕ್ಷರಸ್ಥ ಸಮಾಜದ ಜನಪದ ಅಂಶಗಳು ಇವನ ಮೇಲೆ ಪರಿಣಾಮವನ್ನುಂಟುಮಾಡುತ್ತವೆ. ಆದುದರಿಂದ, ಜಾನಪದ ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಿರುತ್ತದೆ ಇಲ್ಲವೆ ಒಂದು ವರ್ಗದ ಜಾನಪದ ಮತ್ತೊಂದು ವರ್ಗದವರಿಗೆ ಹರಿಯುವುದಿಲ್ಲ ಎಂದು ಹೇಳಲಾಗುವುದಿಲ್ಲ. ದಟ್ಟ ನಾಗರಿಕತೆಯ ನಡುವಿನಲ್ಲೇ ವ್ಯಕ್ತಿ ಬೆಳೆದರೂ ಆತ ತನ್ನ ಸುತ್ತಲ ಬದುಕಿಗೆ ತೋರಿಸುವ ಸಂವೇದನೆ ಅವನನ್ನು ಒಂದು ಸಂಪ್ರದಾಯಕ್ಕೆ ಬದ್ಧವಾಗಿಸಿರುತ್ತದೆ. ಬದುಕಿನ ಬೇರೆ ಬೇರೆ ಸಂದರ್ಭಗಳಲ್ಲಿ ಒಬ್ಬ ನಾಗರಿಕನ ಸೂಕ್ಷ್ಮ ಸಂವೇದನೆ, ಆತ ಬೆಳೆದ ವಾತಾವರಣಕ್ಕೆ ಅನುಗುಣವಾಗಿ ಎಂದರೆ ಆ ವಾತಾವರಣದ ಸಂಪ್ರದಾಯಕ್ಕನುಗುಣವಾಗಿ ಇರುತ್ತದೆ. ಸಂಪ್ರದಾಯ ಒಬ್ಬರಿಂದ ಮತ್ತೊಬ್ಬರಿಗೆ ಕೊಡುಗೆಯಾಗಿ ಬಂದದ್ದೇ ಹೊರತು, ತನಗೆ ತಾನೇ ಆದುದಲ್ಲ. ನಾಗರಿಕನಾಗಿರುವ ವ್ಯಕ್ತಿಯೊಬ್ಬನಲ್ಲಿ ಅನಕ್ಷರಸ್ಥ ಸಮಾಜದ ವ್ಯಕ್ತಿಯಲ್ಲಿ ಇರುವಷ್ಟು ಜಾನಪದ ಇರುವುದಿಲ್ಲ. ಆದರೆ ಜಾನಪದದಿಂದ ನಾಗರಿಕ ವ್ಯಕ್ತಿ ಸಂಪೂರ್ಣವಾಗಿ ತಪ್ಪಿಸಿಕೊಂಡಿರಲು ಸಾಧ್ಯವಿಲ್ಲ. ವ್ಯತ್ಯಾಸ ಏನಿದ್ದರೂ ಎಷ್ಟರಮಟ್ಟಿಗೆ ಜಾನಪದ ಅಂಶ ಇವನಲ್ಲಿ ಉಳಿದುಬಂದಿದೆ ಎಂಬುದಷ್ಟೆ. ಅರೇಲಿಯೊ ಎಂ. ಎಸ್ಪಿನೋಸ ಎಂಬ ವಿದ್ವಾಂಸ ಜಾನಪದವನ್ನು ಜನಪ್ರಿಯ ಜ್ಞಾನ ಎಂದು ಹೆಸರಿಸುತ್ತಾನೆ. ಮಾನವ ಸಮುದಾಯ ಏನನ್ನು ಅನಂತರ ಕಾಲದಿಂದ ಅನುಭವಿಸಿತೋ ಕಲಿಯಿತೋ ಮತ್ತು ಆಚರಣೆಗೆ ತಂದು ಜನಪ್ರಿಯ ಹಾಗೂ ಸಾಂಪ್ರದಾಯಿಕ ಜ್ಞಾನವನ್ನಾಗಿ ಮಾಡಿತೋ ಅದು ವೈಜ್ಞಾನಿಕ ಜ್ಞಾನಕ್ಕಿಂತ ಭಿನ್ನವಾದುದು ಎನ್ನುತ್ತಾನೆ; ನಾಗರಿಕ ಸಮಾಜದ ಸಾಮಾನ್ಯ ಮನುಷ್ಯ, ಆದಿವಾಸಿ ಮತ್ತು ಅನಕ್ಷರಸ್ಥ ಇವರಲ್ಲಿರುವ ಕಥೆ, ನಂಬಿಕೆ, ಪುರಾಣ, ಮಂತ್ರ, ಆಚರಣೆಗಳು ಇವೆಲ್ಲ ಜಾನಪದದ ಎಂದು ಹೆಸರಿಸಿ, ಆದಿಮಾನವನ ಮನಸ್ಸಿನ ನೇರವಾದ ಅಭಿವ್ಯಕ್ತಿಯೇ ಜಾನಪದ ಎಂದು ತಿಳಿಸುತ್ತಾನೆ. ಮ್ಯಾಕ್ ಎಡ್ವರ್ಡ್ ಲೀಚ್ ಎಂಬ ವಿದ್ವಾಂಸ ಜಾನಪದದ ಎಲ್ಲ ವಿಭಾಗಗಳೂ ಮೂಲದಲ್ಲಿ ಒಬ್ಬ ವ್ಯಕ್ತಿಯ ಕರ್ತೃತ್ವವಾಗಿದ್ದು ಅನಂತರ ಅದನ್ನು ಜನತೆ ತೆಗೆದುಕೊಂಡು, ಪುನಃ ಸೃಷ್ಟಿಸುತ್ತದೆ, ನಿರಂತರ ಪುನರಾವರ್ತನೆಯಿಂದಾಗಿ ಅದರಲ್ಲಿ ಹೆಚ್ಚಿನ ಬದಲಾವಣೆಗಳು ಆಗುವುದೂ ಸಾಧ್ಯ ಎಂದು ಹೇಳುತ್ತಾನೆ. ಜಾನಪದ ತಲೆಮಾರಿನಿಂದ ತಲೆಮಾರಿಗೆ ಬರುವಾಗ, ಅದರ ಮೂಲ ಕರ್ತೃ ಕಣ್ಮರೆಯಾಗಿ ಅದು ಒಟ್ಟು ಜನತೆಯ ಸೃಷ್ಟಿಯಾಗಿ ಸ್ವತ್ತಾಗಿ ಉಳಿಯುತ್ತದೆ. ಅದರಲ್ಲಿ ಒಬ್ಬ ವ್ಯಕ್ತಿಯ ವೈಯಕ್ತಿಕ ಅನಿಸಿಕೆಗಳನ್ನು ಕಾಣುವುದಕ್ಕಿಂತಲೂ ಒಟ್ಟು ಒಂದು ಜನಾಂಗದ ಅನಿಸಿಕೆಯನ್ನು ಕಾಣಲು ಸಾಧ್ಯವಾಗುತ್ತದೆ. ಒಂದು ಗೊತ್ತಾದ ಭೌಗೋಳಿಕ ಪ್ರದೇಶದಲ್ಲಿ ಕಂಡುಬರುವ ಜಾನಪದದ ಬಹಳಷ್ಟು ಲಕ್ಷಣಗಳು ಇನ್ನೊಂದು ಭೌಗೋಳಿಕ ಪ್ರದೇಶದಲ್ಲೂ ಕಂಡುಬರುವುದರಿಂದ ಬೇರೆ ಬೇರೆ ಜನಾಂಗಗಳ ಮನಸ್ಸು ಹೇಗೆ ಮೂಲಭೂತವಾಗಿ ಒಂದೇ ಆಗಿರುತ್ತದೆ ಎಂಬುದನ್ನು ಗುರುತಿಸಬಹುದು. ಜಾನಪದಕ್ಕೆ ಸಾಂಸ್ಕøತಿಕ ಮೌಲ್ಯ ಬರುವುದು ಈ ಕಾರಣದಿಂದಲೇ.

ಬಹಳಷ್ಟು ಮಂದಿ ಜಾನಪದ ವಿದ್ವಾಂಸರು ಜಾನಪದದಲ್ಲಿ ಅದರ ಸಾಹಿತ್ಯಿಕ ವರ್ಗದತ್ತ ಹೆಚ್ಚಾಗಿ ಒಲಿದಿದ್ದರಾದರೂ ಸಾಹಿತ್ಯೇತರ ವಿಭಾಗವನ್ನು ಪೂರ್ತಿಯಾಗಿ ನಿರ್ಲಕ್ಷಿಸಿಲ್ಲ. ಜನಪದ ಕಥೆಗಳ ಬಗ್ಗೆ ಮೆಚ್ಚುವಷ್ಟು ಕೆಲಸ ಮಾಡಿರುವ ಸ್ಟಿತ್ ತಾಂಪ್ಸನ್ ಎಂಬ ಪ್ರಸಿದ್ಧ ಜಾನಪದ ವಿದ್ವಾಂಸ ಮೇಲಿನ ಎರಡೂ ವರ್ಗಗಳನ್ನು ಗಮನಿಸಿದ್ದಾನೆ. ಆಚರಣೆ, ವ್ಯವಸಾಯ ಗೃಹೋಪಕರಣ, ಕಟ್ಟಡ ಕಟ್ಟುವ ವಿಧಾನ, ನಾನಾ ತರಹದ ಪಾತ್ರೆಗಳು, ಮತ್ತು ಸಾಂಪ್ರದಾಯಿಕವಾದ ಸಮಾಜ ಸಂಘಟನೆ-ಇವುಗಳನ್ನು ಕುರಿತಾದ ಅಭ್ಯಾಸವನ್ನು ಮಾನವ ಕುಶಲಶಾಸ್ತ್ರ ಎಂದು ಆತ ಪರಿಗಣಿಸುತ್ತಾನೆ. ಆದರೆ ಆತ ಅಕ್ಷರಸ್ಥ ಜನರಲ್ಲಿ ಮೇಲೆ ಹೇಳಿದ ಎಲ್ಲವೂ ಜಾನಪದವಾಗುತ್ತವೆ; ಏಕೆಂದರೆ ಅವು ಪೂರ್ತಿ ಸಾಂಪ್ರದಾಯಿಕವಾಗಿ ಬೆಳೆದುಕೊಂಡು ಬರುವ ಕಾರಣ-ಎನ್ನುತ್ತಾನೆ. ಇದುವರೆಗೆ ಈ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅನೇಕ ವಿದ್ವಾಂಸರು ಹೇಳುವ ಜಾನಪದ ಲಕ್ಷಣಗಳನ್ನು ಗಮನಿಸಿದಾಗ ಅದು ಜನತೆ ಸಂಗ್ರಹಿಸಿದ ಜ್ಞಾನ, ಸಾಮೂಹಿಕ ಸೃಷ್ಟಿ, ಕಂಠಪಾಠ ಸಂಪ್ರದಾಯದ ಮೂಲಕ ತಲೆಮಾರಿನಿಂದ ತಲೆಮಾರಿಗೆ ಕೊಡುಗೆಯಾಗಿ ಬಂದದ್ದು-ಎಂದು ತಿಳಿದುಬರುತ್ತದೆ.

ಮಾನವಶಾಸ್ತ್ರ ಮತ್ತು ಜಾನಪದವನ್ನು ಕಟ್ಟುನಿಟ್ಟಾಗಿ ಒಂದರಿಂದ ಮತ್ತೊಂದನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಆಸ್ಟ್ರೇಲಿಯದ ಬುಷ್‍ಮನ್ನರಂಥ ಅನಕ್ಷರಸ್ಥ ಜನರಲ್ಲಿ ಬಳಕೆಯಲ್ಲಿರುವ ಹಾಡುಗಳು, ಕಥೆಗಳು, ಪುರಾಣಗಳು, ಆಚರಣೆಗಳು, ನೃತ್ಯಗಳು ಮತ್ತು ಕಲೆಗಳನ್ನು ಮಾನವಶಾಸ್ತ್ರಜ್ಞರು ಅಭ್ಯಾಸ ಮಾಡುತ್ತಾರೆ. ಹಾಗಾಗಿ ಅವರೂ ಒಂದು ಅರ್ಥದಲ್ಲಿ ಜಾನಪದ ವಿದ್ವಾಂಸರೇ ಆಗಿದ್ದಾರೆ. ಮಾನವಶಾಸ್ತ್ರಜ್ಞರಿಗೆ ಮನುಷ್ಯ ಮುಖ್ಯ. ಅವರು ಮನುಷ್ಯನ ಸಂಸ್ಕøತಿಗೆ ಆದ್ಯತೆ ನೀಡುತ್ತಾರೆ. ಜಾನಪದ ಅವರಿಗೆ ಅಷ್ಟೇನೂ ಪ್ರಮುಖವಾದುದಲ್ಲ. ಸ್ಥೂಲವಾಗಿ ಈ ಎರಡು ಶಾಸ್ತ್ರಗಳ ನಡುವಣ ವ್ಯತ್ಯಾಸವನ್ನು ಹೇಳುವುದಾದರೆ, ತಲೆಮಾರಿನಿಂದ ತಲೆಮಾರಿಗೆ ಕಂಠಪಾಠ ಸಂಪ್ರದಾಯವಾಗಿ ಅನಕ್ಷರಸ್ಥ ಸಮಾಜದಲ್ಲಿ ಉಳಿದು ಬಂದ ಜನಪದ ಗೀತೆ ಜಾನಪದವಾದರೆ, ಆ ಗೀತೆಯಲ್ಲಿ ಹುದುಗಿರುವ ಸಂಸ್ಕøತಿ ಮಾನವಶಾಸ್ತ್ರವಾಗುತ್ತದೆ. ಜಾನಪದದ ವಸ್ತುಗಳಿಂದಲೇ ಮಾನವಶಾಸ್ತ್ರಜ್ಞ ಮನುಷ್ಯನ ಸಾಂಸ್ಕøತಿಕ ಅಧ್ಯಯನ ಮಾಡುತ್ತಾನೆ. ಸುಮಾರು ಒಂದು ನೂರು ವರ್ಷದ ಕೆಳಗೆ ಮಾನವಶಾಸ್ತ್ರದ ವ್ಯಾಪಕತೆಯಲ್ಲಿ ಜಾನಪದ ಮುಚ್ಚಿಹೋಗಿತ್ತು. ಫೋಕ್‍ಲೋರ್ ಎಂಬ ಪದವನ್ನು ಡಬ್ಲ್ಯು.ಜೆ. ಥಾಂಸ್ ಸೃಷ್ಟಿಸಿ, ಚಾಲ್ತಿಗೆ ತಂದಮೇಲೆ ಜಾನಪದಕ್ಕೊಂದು ಖಚಿತವಾದ ಸ್ವರೂಪ ಬರಲಾರಂಭಿಸಿತು. ಈಗ ಜಾನಪದ ಒಂದು ಸ್ವತಂತ್ರ ವಿಷಯವಾಗಿ, ವಿಶ್ವದ ಹಲವಾರು ಕಡೆ ವಿದ್ವಾಂಸರು ಅದನ್ನು ಅಭ್ಯಾಸ ಮಾಡುತ್ತಿದ್ದಾರೆ.

ಅನೇಕ ಶಾಸ್ತ್ರಗಳು ಜಾನಪದದಲ್ಲಿ ಒಳಗು, ಚರಿತ್ರೆಗೆ ಸಂಬಂಧಿಸಿದ ಎಲ್ಲ ಸಂಗತಿಗಳೂ ಜಾನಪದದಲ್ಲಿ ದೊರಕದಿದ್ದರೂ ಮನುಷ್ಯನ ಬದುಕಿನ, ಸಮಾಜದ ಘಟನೆಗಳನ್ನು ಗುರುತಿಸುವಲ್ಲಿ ಜಾನಪದ ನೆರವಾಗುತ್ತದೆ. ಸಾಮಾನ್ಯವಾಗಿ ಲಾವಣಿಗಳಲ್ಲಿ ಅನೇಕ ಚಾರಿತ್ರಿಕ ಘಟನೆಗಳನ್ನು ಗುರುತಿಸಬಹುದು. ಒಂದು ಐತಿಹಾಸಿಕ ಲಾವಣಿಯಲ್ಲಿ (ಉದಾ: ಪಿರಿಯಾಪಟ್ಟಣದ ಲಾವಣಿ) ಆ ಕಾಲದ ಉಡುಗೆತೊಡಿಗೆ, ಜನಜೀವನ, ಯುದ್ಧಕಾಲಗಳಲ್ಲಿ ಬಳಸುತ್ತಿದ್ದ ಆಯುಧಗಳು, ಇತ್ಯಾದಿಗಳನ್ನು ಗುರುತಿಸಬಹುದು. ಜಾನಪದ ಸಾಮಗ್ರಿಗಳಿಂದ ಭಾಷಾಶಾಸ್ತ್ರವನ್ನು ಅಭ್ಯಾಸ ಮಾಡಲಾಗುತ್ತಿದೆ. ಅದರಂತೆ ವೈದ್ಯಶಾಸ್ತ್ರವನ್ನೂ ಜಾನಪದ ಸಂಗತಿಗಳಿಂದಲೇ ಅಭ್ಯಾಸ ಮಾಡಬಹುದಾಗಿದೆ. ಆಧುನಿಕ ರೀತಿಯ ವಿಜ್ಞಾನವನ್ನು ನೇರವಾಗಿ ಜಾನಪದದಲ್ಲಿ ಕಾಣಲಾಗದಿದ್ದರೂ ಅದರ ಆಂಶಿಕ ಗುಣಗಳನ್ನು ಅದರಲ್ಲಿ ಪತ್ತೆಹಚ್ಚಬಹುದು. ಭೂವಿಜ್ಞಾನ ಮತ್ತು ಭೂರಸಾಯನಶಾಸ್ತ್ರಗಳೆರಡೂ ಭೂಮಿಯನ್ನು ಕುರಿತವು. ಆದರೆ ಮೊದಲನೆಯದು ಭೂಮಿಯನ್ನು ಅದರ ಸಮಗ್ರ ಐತಿಹಾಸಿಕ ಬೆಳವಣಿಗೆಯ ದೃಷ್ಟಿಯಿಂದ ಪರಿಶೀಲಿಸುತ್ತದೆ; ಎರಡನೆಯದು ಭೂಮಿಯನ್ನು ಬೆಳೆಗಳ ದೃಷ್ಟಿಯಿಂದ ನೋಡುತ್ತದೆ. ಜಾನಪದವನ್ನು ಸಮಾಜಶಾಸ್ತ್ರದ, ಮಾನವಶಾಸ್ತ್ರದ, ಇತಿಹಾಸದ, ರಾಜ್ಯಶಾಸ್ತ್ರದ, ಸಾಮಾಜಿಕ ಕಟ್ಟುಕಟ್ಟಳೆಗಳ-ಈ ರೀತಿ ನಾನಾ ದೃಷ್ಟಿಗಳಿಂದ ಅಧ್ಯಯನ ಮಾಡಬಹುದು. ಅದರ ವ್ಯಾಪ್ತಿ ಇಷ್ಟೇ ಎಂದು ನಿರ್ಣಯಿಸಲು ಸಾಧ್ಯವಿಲ್ಲ. ಬದುಕಿನ ಬೇರೆ ಬೇರೆ ವಿಭಾಗಗಳಲ್ಲಿ ಇದು ಅಂಟಿಕೊಂಡೇ ಇರುತ್ತದೆ. ಜಾನಪದ ಸಾಮಗ್ರಿಯನ್ನು ಜಾನಪದದ ಸಲುವಾಗಿಯೇ ಪರಿಶೀಲಿಸಿ ಅವುಗಳ ಬೆಳವಣಿಗೆ, ಹಂಚಿಕೆಗಳನ್ನೂ ಚರಿತ್ರೆ, ಭೂಗೋಳಗಳ ದೃಷ್ಟಿಯಿಂದ ಅವುಗಳ ಏಕತೆಯನ್ನೂ ಕಂಡುಹಿಡಿಯುವುದರಲ್ಲಿ ಮತ್ತು ಅವುಗಳ ಮೂಲಕವಾಗಿ ಜನಾಂಗಿಕ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಗುಣಲಕ್ಷಣಗಳನ್ನೂ ಗುರುತಿಸುವಲ್ಲಿ ಜಾನಪದದ ಮಹತ್ವವಿದೆ.

ಜಾನಪದವನ್ನು ರಾಲ್ಫ್ ಸ್ಟೀಲ್‍ಬಾಗ್ಸ್ ಎಂಬ ವಿದ್ವಾಂಸ ಸಾಹಿತ್ಯಿಕ ವರ್ಗ, ಭಾಷಿಕ ವರ್ಗ, ವೈಜ್ಞಾನಿಕ ವರ್ಗ ಮತ್ತು ಕ್ರಿಯಾತ್ಮಕ ವರ್ಗ ಎಂದು ಸಾಮಾನ್ಯವಾಗಿ ನಾಲ್ಕು ವರ್ಗಗಳಾಗಿ ವಿಂಗಡಿಸುತ್ತಾನೆ. ಸಾಹಿತ್ಯಿಕ ವರ್ಗದಲ್ಲಿ ಪುರಾಣ, ಐತಿಹ್ಯ, ಕಥೆ ಮತ್ತು ಹಾಡು; ಭಾಷಿಕ ವರ್ಗದಲ್ಲಿ ಮಾತು, ಸನ್ನೆ, ಗಾದೆ, ಒಗಟು; ವೈಜ್ಞಾನಿಕ ವರ್ಗದಲ್ಲಿ ಮದ್ದು, ಭವಿಷ್ಯ, ಮಾಂತ್ರಿಕತೆ ಮತ್ತು ನಾನಾರೀತಿಯ ನಂಬಿಕೆಗಳು; ಕ್ರಿಯಾತ್ಮಕ ವರ್ಗದಲ್ಲಿ ಸಂಗೀತ, ನೃತ್ಯ, ಆಟ, ಹಬ್ಬ, ಪದ್ಧತಿ, ಕಲೆ, ಅಡುಗೆ ಮುಂತಾದವು ಬರುತ್ತವೆ. ಆದರೆ ಒಟ್ಟು ಜನಪದ ಸಾಹಿತ್ಯ ವಿಭಾಗವನ್ನು ಗಣನೆಗೆ ತೆಗೆದುಕೊಂಡರೆ, ಸಾಹಿತ್ಯಿಕ ಹಾಗೂ ಭಾಷಿಕ ವರ್ಗಗಳೆರಡನ್ನೂ ಒಂದಾಗಿ ಪರಿಗಣಿಸಬೇಕಾಗುತ್ತದೆ. ಸಾಹಿತ್ಯಿಕ ವಿಭಾಗದಲ್ಲಿ ಭಾಷೆಯ ಕಲಾತ್ಮಕತೆಯನ್ನೂ ಭಾಷಿಕ ವಿಭಾಗದಲ್ಲಿ ಭಾಷೆಯ ಸಾಮಾನ್ಯ ಸ್ವರೂಪವನ್ನೂ ಕಾಣಬಹುದು. ಇವೆರಡರ ಮೂಲದ್ರವ್ಯ ಭಾಷೆಯೇ. ಆದಕಾರಣ ಈ ಎರಡೂ ವರ್ಗಗಳನ್ನು ಸಾಹಿತ್ಯಿಕ ಎಂಬ ಒಂದೇ ಹೆಸರಿನಿಂದ ಕರೆಯಬಹುದಾಗಿದೆ.

ಆರ್ಚರ್ ಟೇಲರ್ ಇನ್ನೊಬ್ಬ ವಿದ್ವಾಂಸ ಜಾನಪದ ಸಾಮಗ್ರಿಗಳನ್ನು ಪ್ರಮುಖವಾಗಿ ಎರಡು ವರ್ಗಗಳಾಗಿ ವರ್ಗೀಕರಿಸುತ್ತಾನೆ: 1. ಭೌತಿಕ ಸಾಮಗ್ರಿಗಳು, ಅಂದರೆ ವಸ್ತುಗಳ ಸ್ವರೂಪ ಮತ್ತು ಉಪಯೋಗ, ಉಡುಗೆ ತೊಡಿಗೆಗಳು ಮತ್ತು ಮನೆಗಳ ಮತ್ತು ಹಳ್ಳಿಗಳ ರಚನಾವಿನ್ಯಾಸ. 2. ಶಾಬ್ದಿಕ ಜಾನಪದ. ಅಂದರೆ ಸ್ಥಳಗಳ ಹಾಗೂ ವ್ಯಕ್ತಿಗಳ ಹೆಸರುಗಳು, ಕಥೆಗಳು, ಕಥಾಲಾವಣಿಗಳು, ಭಾವಗೀತಾತ್ಮಕ ಜನಪದ ಗೀತೆಗಳು, ಶಿಶುಪ್ರಾಸಗಳು, ಸ್ತೋತ್ರಗೀತೆಗಳು, ಗಾದೆಗಳು ಮತ್ತು ಒಗಟುಗಳು. ಟೇಲರ್ ಮಾಡಿರುವ ಎರಡು ವಿಭಾಗಗಳನ್ನು ಒಪ್ಪಬಹುದಾದರೂ ಎರಡನೆಯ ವಿಭಾಗವನ್ನು ಇನ್ನೂ ನಿಖರವಾಗಿ ಹೇಳಬೇಕಾಗುತ್ತದೆ. ಭಾರತೀಯ ಜಾನಪದ ವಿದ್ವಾಂಸರಾದ ಹಾ.ಮಾ.ನಾಯಕರು ಜನಪದ ಸಾಹಿತ್ಯವನ್ನು ಮುಖ್ಯವಾಗಿ ನಾಲ್ಕು ವಿಭಾಗವಾಗಿ ವಿಂಗಡಿಸಿದ್ದಾರೆ-ಜನಪದ ಕಥೆ, ಜನಪದ ಗೀತೆ, ಒಗಟು ಮತ್ತು ಗಾದೆ ಎಂದು. ಈ ವಿಭಜನೆ ಟೇಲರನ ವಿಭಜನೆಗಿಂತ ಹೆಚ್ಚು ಸಮಂಜಸವಾಗಿದೆ. ನಾಯಕರ ವಿಧಾನವನ್ನು ಟೇಲರನ ಎರಡನೆಯ ವಿಭಾಗಕ್ಕೆ ಅನ್ವಯಿಸಿದಲ್ಲಿ ಜಾನಪದವನ್ನು ಸ್ಪಷ್ಟವಾಗಿ ವಿಭಾಗ ಮಾಡಲು ಸಾಧ್ಯ-ಜನಪದ ಸಾಹಿತ್ಯ ಹಾಗೂ ಭೌತಿಕ ಸಾಮಗ್ರಿಗಳು ಎಂದು.

1. ಜನಪದ ಸಾಹಿತ್ಯದ ನಾಲ್ಕು ಮುಖ್ಯ ವಿಭಾಗಗಳಲ್ಲಿ ಜನಪದಗೀತೆ ಹೆಚ್ಚು ವ್ಯಾಪ್ತಿಯುಳ್ಳದ್ದಾಗಿದೆ. ಅದು ಬ್ಯಾಲಡ್, ಲಾವಣಿ, ವೃತ್ತಿಹಾಡುಗಳು, ಬೇಸಾಯಕ್ಕೆ ಸಂಬಂಧಿಸಿದ ಹಾಡುಗಳು, ಪ್ರಕೃತಿಗೆ ಸಂಬಂಧಿಸಿದ ಹಾಡುಗಳು, ಧಾರ್ಮಿಕ ಹಾಡುಗಳು, ಮಕ್ಕಳ ಹಾಡುಗಳು ಎಂಬ ಅನೇಕ ಬಗೆಯ ಉಪಪ್ರಕಾರಗಳನ್ನು ಒಳಗೊಳ್ಳುತ್ತದೆ.

ಜನಪದ ಕಥೆ: ಬಾಯಿಂದ ಬಾಯಿಗೆ ಸಾಂಪ್ರದಾಯಿಕವಾಗಿ ಹರಿದುಬರುವ ಗದ್ಯ ಪ್ರಕಾರ-ಜನಪದ ಕಥೆ(ಪೋಕ್ ಟೇಲ್). ಸ್ಟಿತ್ ತಾಂಪ್ಸನ್, ಆಂಟಿ ಆರ್ನೆ ಮೊದಲಾದ ಪಾಶ್ಚಾತ್ಯ ವಿದ್ವಾಂಸರು ಜನಪದ ಕಥೆಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ.

ಜನಪದ ಕಥೆಗಳಿಗೆ ಮರ್ಖೆನ್ (ಜರ್ಮನ್), ಸಾಗ (ಸ್ವೀಡಿಷ್) ಎಂಬ ಹೆಸರುಗಳೂ ಬಳಕೆಯಲ್ಲಿವೆ. ವಸ್ತುವಿನ ದೃಷ್ಟಿಯಿಂದ ಜನಪದ ಕಥೆಗಳನ್ನು ಕಿನ್ನರ ಕಥೆಗಳು, ಪ್ರಾಣಿಗಳ ಕಥೆಗಳು, ಅತಿಮಾನುಷ ಕಥೆಗಳು, ವಿನೋದ ಕಥೆಗಳು, ತಾಂತ್ರಿಕ ಕಥೆಗಳು, ನೀತಿಕಥೆಗಳು ಎಂದು ವಿಭಾಗಿಸಬಹುದು. ಸಾಮಾನ್ಯವಾಗಿ ಎಲ್ಲ ಕಥೆಗಳ ಪ್ರಾರಂಭವೂ ಒಂದೂರು, ಆವೂರಲ್ಲಿ ಒಬ್ಬ ರಾಜ, ಒಂದಾನೊಂದು ಕಾಲದಲ್ಲಿ, ಒಂದಾನೊಂದು ಊರಿನಲ್ಲಿ ಎಂದೇ ಇರುತ್ತದೆ. ಕಥೆಗಳಲ್ಲಿ ಸಮಾಜದ ಎಲ್ಲ ಸ್ತರದ ಜನಗಳೂ ಬರುತ್ತಾರೆ. ಕಿನ್ನರ ಕಥೆಗಳು ಪ್ರಸಾರದ ದೃಷ್ಷಿಯಿಂದ ಮಹತ್ತ್ವದ್ದಾಗಿವೆ. ಒಮ್ಮೊಮ್ಮೆ ಪ್ರಾಣಿಕಥೆಗಳೂ ಕೂಡ ಕಿನ್ನರ ಕಥೆಗಳ ಭಾಗಗಳಾಗಿಬಿಡುತ್ತವೆ. ಕಿನ್ನರ ಕಥೆಗಳು ದೇಶಪರ್ಯಟನೆ ಮಾಡುವಷ್ಟು ಸುಲಭವಾಗಿ ಉಳಿದವು ಮಾಡುವುದಿಲ್ಲ. ಫಿನ್‍ಲೆಂಡಿನ ರಾಷ್ಟ್ರೀಯ ಮಹಾಕಾವ್ಯ ಕಾಲೇವಾಲಾದ ಸಂಪಾದನೆಯಲ್ಲಿ ತುಂಬ ನೆರವಿಗೆ ಬಂದ ಚಾರಿತ್ರಿಕ ಭೌಗೋಳಿಕ ವಿಧಾನದ ಪರಿಶೀಲನೆಗೆ ಕಿನ್ನರ ಕಥೆಗಳು ಹೆಚ್ಚು ಸಹಾಯ ಮಾಡುತ್ತವೆ. ಪ್ರಾಣಿಗಳನ್ನು ಪಾತ್ರವಾಗುಳ್ಳ ಕಥೆಗಳು ಪ್ರಾಣಿಕಥೆಗಳು. ಇವು ಅತ್ಯಂತ ಪ್ರಾಚೀನವಾದುವು ಮತ್ತು ಜಗತ್ತಿನ ಅನೇಕ ಸಂಸ್ಕøತಿಗಳಲ್ಲಿ ಕಂಡುಬರುವಂಥವು. ಜನಪದ ಕಥೆಗಳಲ್ಲಿ ಮಾನವನ ಸುಪ್ತ ಮನಸ್ಸಿನ ಬಯಕೆಗಳನ್ನು ಕಾಣಬಹುದು. ಮನಶ್ಯಾಸ್ತ್ರಜ್ಞರಿಗೆ ಈ ದಿಶೆಯಲ್ಲಿ ಕೆಲಸಮಾಡಲು ಒಳ್ಳೆಯ ಅವಕಾಶವಿದೆ.
ಜನಪದ ಗೀತೆ: ಕಂಠಪಾಠ ಸಂಪ್ರದಾಯದಲ್ಲಿ ತಲೆಮಾರಿನಿಂದ ತಲೆಮಾರಿಗೆ ಉಳಿದು ಬರುವುದು ಗೀತೆ. ಕಥೆಗಳಿಗಿಂತ ಹೆಚ್ಚು ಶಕ್ತಿಯುತವಾಗಿ ಇದು ಕಂಠಪಾಠ ಸಂಪ್ರದಾಯದಲ್ಲಿ ಉಳಿದು ಬರಲು ಮುಖ್ಯ ಕಾರಣ, ಇದಕ್ಕಿರುವ ಹಾಡಿನ ಗುಣ, ಗೀತೆಯಲ್ಲಿ ಲಾವಣಿಗಳು, ಬ್ಯಾಲಡ್‍ಗಳು, ಕಥನಗೀತೆಗಳು, ವ್ಯವಸಾಯಕ್ಕೆ ಸಂಬಂಧಪಟ್ಟ ಹಾಡುಗಳು, ಹಬ್ಬಹರಿದಿನಗಳಿಗೆ ಸಂಬಂಧಪಟ್ಟ ಹಾಡುಗಳು, ಮದುವೆಯಂಥ ವಿಶೇಷ ಸಂದರ್ಭಗಳಲ್ಲಿ ಹಾಡುವ ಹಾಡುಗಳು, ಮಕ್ಕಳ ಹಾಡುಗಳು, ನೃತ್ಯ ಸಂಪ್ರದಾಯಕ್ಕೆ ಸೇರಿದ ಹಾಡುಗಳು-ಈ ರೀತಿ ಅನೇಕ ಬಗೆಯ ಸಂಪ್ರದಾಯಗಳಿಗೆ ನಂಟುತನವಿರುವ ಗೀತಪ್ರಕಾರಗಳನ್ನು ಕಾಣಬಹುದು. ಕಾಲೇವಾಲಾದಂಥ ಜನಪದ ಮಹಾಕಾವ್ಯಗಳು ಗೀತಪ್ರಕಾರದಲ್ಲೇ ಬರುತ್ತವೆ.
ಲಾವಣಿಯ ವಸ್ತು ಸಾಮಾನ್ಯವಾಗಿ ಐತಿಹಾಸಿಕವಾಗಿದ್ದು ಅದು ಏಕಕರ್ತೃಕವಾಗಿರುತ್ತದೆ. ಬಹಳಷ್ಟು ಕಾಲ ಅದು ಶುದ್ಧರೂಪದಲ್ಲಿ ಉಳಿಯುವ ಸಾಧ್ಯತೆ ಇದೆ. ಅದರ ಮೇಲೆ ಜನಪದದ ಪ್ರಭಾವ ಅಷ್ಟಾಗಿ ಆಗುವುದಿಲ್ಲ. ಲಾವಣಿಗಳನ್ನು ಸಾಮಾನ್ಯವಾಗಿ ಯಾವುದಾದರೊಂದು ವಾದ್ಯದ ಹಿನ್ನೆಲೆಯಲ್ಲಿ ಗಂಡಸರು ಹಾಡುತ್ತಾರೆ.

ಬ್ಯಾಲಡ್ ಎಂಬುದು ಯೂರೋಪ್ ಖಂಡದಲ್ಲಿ ಬಳಕೆಯಲ್ಲಿರುವ ಒಂದು ಪ್ರಸಿದ್ಧ ಜನಪದ ಗೀತಪ್ರಕಾರ. ಅದು ಕಥನಾತ್ಮಕವಾಗಿದ್ದು, ಜನತೆಯ ಬಾಯಲ್ಲಿ ಬದಲಾವಣೆ ಹೊಂದುತ್ತಿರುತ್ತದೆ. ಅದನ್ನು ಹಾಡಲೂ ಯಾವುದಾದರೊಂದು ವಾದ್ಯದ ಹಿನ್ನೆಲೆ ಅವಶ್ಯಕ.

ಜನಪದ ಕಥನ ಗೀತೆ, ಕರ್ನಾಟಕದಲ್ಲಿ ಮುಖ್ಯವಾಗಿ ಹೆಂಗಸರು ಹಾಡುವ ಗೀತಪ್ರಕಾರ, ಇದರ ವಸ್ತು ಸಾಮಾನ್ಯವಾಗಿ ಸಾಮಾಜಿಕ ಮತ್ತು ಪೌರಾಣಿಕವಾಗಿರುತ್ತದೆ. ಕಥನಗೀತೆಯ ಮುಖ್ಯಧ್ವನಿ, ಸಾಮಾನ್ಯವಾಗಿ ದುರಂತವಾದ್ದು.

ವ್ಯವಸಾಯವನ್ನೇ ಮುಖ್ಯ ಕಸಬಾಗುಳ್ಳ ಭಾರತದಂಥ ದೇಶಗಳಲ್ಲಿ ವ್ಯವಸಾಯಕ್ಕೆ ಸಂಬಂಧಿಸಿದ ನಾನಾಬಗೆಯ ಹಾಡುಗಳು ದೊರಕುತ್ತವೆ. ರೈತ ತನ್ನ ಬೇಸಾಯ ಜೀವನದ ವಿವಿಧ ಘಟ್ಟಗಳಲ್ಲಿ ಹಾಡಿಕೊಳ್ಳುವ ಹಾಡುಗಳು ಈ ಪ್ರಕಾರಕ್ಕೆ ಸೇರುತ್ತವೆ. ಗೊಬ್ಬರಗೋಡು ಹೂಡುವಾಗ, ಉಳುವಾಗ, ಬಿತ್ತನೆ ಮಾಡುವಾಗ, ನಾಟಿ ಹಾಕುವಾಗ, ಬೆದೆ ಕೀಳುವಾಗ, ಕಳೆ ಕೀಳುವಾಗ, ಬೆಳೆದ ಧಾನ್ಯವನ್ನು ಕೊಠಾರದಲ್ಲಿ ಒಕ್ಕುವಾಗ, ಸುಗ್ಗಿ ಕಾಲದಲ್ಲಿ ಬೆಳೆದ ಫಸಲನ್ನು ಕಣಕ್ಕೆ ಹಾಕಿ ರಾಶಿ ಮಾಡುವಾಗ-ಆತ ಸಂದರ್ಭಕ್ಕನುಗುಣವಾಗಿ ಬಗೆಬಗೆಯ ಹಾಡುಗಳನ್ನು ಹಾಡುತ್ತಾನೆ. ಅವುಗಳ ವಿಷಯ ಮುಖ್ಯವಾಗಿ ದೇವರನ್ನು ತನಗೆ ಅನ್ನಬಟ್ಟೆಗಳನ್ನು ಕೊಡುವ ಭೂಮಿ, ಮಳೆ, ಪ್ರಕೃತಿ ಮುಂತಾದವನ್ನು ಕುರಿತುದಾಗಿರುತ್ತದೆ.
ಕ್ರಿಸ್ಮಸ್, ರಂಜಾನ್, ದೀಪಾವಳಿ, ಗೌರಿ ಇಂಥ ಹಬ್ಬಗಳ ಸಂದರ್ಭದಲ್ಲಿ ಹಾಡುವ ಹಾಡುಗಳೇ ಹಬ್ಬದ ಹಾಡುಗಳು. ಇವುಗಳ ವಸ್ತು ಮುಖ್ಯವಾಗಿ ಆಯಾ ಉಪಾಸನಾದೇವತೆಯನ್ನು ಕುರಿತಂತಿರುತ್ತದೆ; ಸಾಮಾನ್ಯವಾಗಿ ಆ ದೇವತೆಯ ಚರಿತ್ರೆ, ಆಕೆಯ ಸ್ತುತಿ ಅಲ್ಲಿ ಬರುತ್ತವೆ.

ಹೆಣ್ಣು-ಗಂಡಿನ ಜೀವನದಲ್ಲಿ ಮದುವೆ ಒಂದು ಪ್ರಮುಖ ಘಟನೆ. ಮದುವೆಯ ಸಮಾರಂಭದಲ್ಲಿ ನಡೆಯುವ ಒಂದೊಂದು ಶಾಸ್ತ್ರಕ್ಕೂ ಒಂದೊಂದು ಬಗೆಯಾದ ಹಾಡನ್ನು ಹಾಡುವುದುಂಟು. ಈ ಹಾಡುಗಳ ವಸ್ತು ಒಟ್ಟು ಮದುವೆಯನ್ನು ಕುರಿತದ್ದೇ ಆಗಿರುತ್ತದೆ. ಹಾಡುಗಳೆಲ್ಲ ಸಾಮಾನ್ಯವಾಗಿ ವಿವರಣಾತ್ಮಕವಾಗಿರುತ್ತವೆ.

ಜೋಗುಳದ ಹಾಡುಗಳು ಅಥವಾ ತೊಟ್ಟಿಲು ಹಾಡುಗಳು, ತಾಯಂದಿರು ತಮ್ಮ ಮಕ್ಕಳನ್ನು ಮಲಗಿಸುವ ಸಂದರ್ಭದಲ್ಲಿ ಆಟವಾಡಿಸುವ ಸಂದರ್ಭದಲ್ಲಿ ಹಾಡುವಂಥವು. ಸಾಮಾನ್ಯವಾಗಿ ಈ ಹಾಡುಗಳಲ್ಲಿ ಮಗುವನ್ನು ಕುರಿತು ಹೇಳುವ ಅಭಿಪ್ರಾಯಗಳು ಹೀಗಿರುತ್ತವೆ. `ಮಗು, ನೀನು ನಿದ್ರೆಗೆ ಹೋಗು, ನಿನ್ನ ಅಮ್ಮ ಇಲ್ಲಿದ್ದಾಳೆ. ನೀನು ಸುಂದರವಾಗಿ ಚೆನ್ನಾಗಿದ್ದೀಯೆ, ಎಲ್ಲವೂ ಚೆನ್ನಾಗಿದೆ.' ಮಗುವಿನ ಸೌಂದರ್ಯವನ್ನು ಕುರಿತು ಹೊಗಳುವ ಹಾಡುಗಳೂ ಇರುತ್ತವೆ. ತಾಯಿ ಮತ್ತು ಮಗುವನ್ನು ದೇವರೊಂದಿಗೆ ಹೋಲಿಸಿರುವ ಹಾಡುಗಳೂ ದೊರಕುತ್ತವೆ. ಯೇಸು ಮತ್ತು ಕನ್ಯೆ ಮೇರಿಯರನ್ನು ಮಗು ಮತ್ತು ತಾಯಿಗೆ ಹೋಲಿಸಿರುವ ಹಾಡುಗಳು ಪಾಶ್ಚಾತ್ಯ ದೇಶಗಳಲ್ಲಿ ಪ್ರಚಾರದಲ್ಲಿವೆ.

ಮಕ್ಕಳು ಹಾಡುವ ಹಾಡುಗಳಲ್ಲಿ ಪ್ರಾಸಬದ್ಧರಚನೆ ಪ್ರಮುಖವಾಗಿ ಕಾಣುತ್ತದೆ. ಶಿಶುಪ್ರಾಸಗಳಲ್ಲಿ ತರ್ಕಬದ್ಧವಾದ ಆಲೋಚನೆಗೆ ಹೆಚ್ಚು ಅವಕಾಶವಿರುವುದಿಲ್ಲ. ಇವು ದೀರ್ಘ ರಚನೆಗಳೂ ಅಲ್ಲ.

ಗಾತ್ರದಲ್ಲಿ ಚಿಕ್ಕದಾದರೂ ಸೂತ್ರದಲ್ಲಿ ಅತ್ಯಂತ ಹಿರಿದಾದ ಒಂದು ಗದ್ಯ ಪ್ರಕಾರ, ಗಾದೆ, ಗೀತೆಯಂತೆಯೇ ಜನರ ಬಾಯಲ್ಲಿ ಮತ್ತೆ ಮತ್ತೆ ಬಳಕೆಗೆ ಬರುವ ಪ್ರಕಾರವಿದು. ಇದು ಉಳಿದ ಜನಪದ ಸಾಹಿತ್ಯಪ್ರಕಾರಗಳಂತೆಯೇ ಸಾಮೂಹಿಕ ಸೃಷ್ಟಿಯಾಗಿ, ಕಂಠಪಾಠದ ಮೂಲಕ ಚಲಾವಣೆಗೆ ಬಂದಿರುವುದು. ಸಾಮಾನ್ಯವಾಗಿ ನೀತಿ ಎಲ್ಲ ಗಾದೆಗಳ ಮುಖ್ಯವಸ್ತುವಾಗಿರುತ್ತದೆ. ಕಾವ್ಯಾಂಶವನ್ನುಳ್ಳ ಗಾದೆಗಳೂ ದೊರಕುತ್ತವೆ. ಮಾನವ ಸ್ವಭಾವದ ಟೀಕೆ, ಹಾಸ್ಯ ಅನೇಕ ಗಾದೆಗಳಲ್ಲಿರುವುದುಂಟು.

ಜನಪದ ಬೌದ್ಧಿಕತೆಯ ಪ್ರತೀಕವಾಗಿ ಒಗಟುಗಳು ಉಳಿದು ಬಂದಿವೆ. ಬುದ್ಧಿ ಪ್ರಧಾನವಾಗಿರುವ ಕಾರಣ ಇವುಗಳಲ್ಲಿ ಜನಪದ ಜಾಣ್ಮೆ, ತಾರ್ಕಿಕತೆ ಮತ್ತು ಕಲ್ಪನಾಸಾಮಥ್ರ್ಯಗಳನ್ನು ಕಾಣಬಹುದಾಗಿದೆ. ಗಾದೆಗಳಿಂದ ಹೇಗೋ ಹಾಗೆ ಒಗಟುಗಳ ಮೂಲಕ ಒಂದು ಜನಾಂಗದ ಸಂಸ್ಕøತಿಯನ್ನು ಅಳೆಯುವುದು ಕಷ್ಟವಾಗುತ್ತದೆ. ಒಗಟುಗಳು ಬುದ್ಧಿಪ್ರಧಾನವಾಗಿರುವುದರಿಂದಲೇ ಅವುಗಳಲ್ಲಿ ಹೆಚ್ಚು ಪ್ರಾದೇಶಿಕ ವ್ಯತ್ಯಾಸಗಳು ಕಂಡುಬರುವುದಿಲ್ಲ.

ಐತಿಹ್ಯಗಳೂ ಜನಪದ ಸಾಹಿತ್ಯಿಕ ವರ್ಗದಲ್ಲೇ ಬರುತ್ತವೆ. ಗಾತ್ರದಲ್ಲಿ ಚಿಕ್ಕದಾದ ಒಂದು ಗದ್ಯಕಥನವೇ ಐತಿಹ್ಯ. ಮರ, ಗಿಡ, ಬೆಟ್ಟ, ನದಿ ಮತ್ತು ಪ್ರಕೃತಿಯಲ್ಲಿ ಕಂಡುಬರುವ ಅನೇಕ ತರಹದ ವೈಚಿತ್ರ್ಯಗಳ ಮೇಲೆ ಸಾಮಾನ್ಯವಾಗಿ ಇವು ಹುಟ್ಟಿಕೊಳ್ಳುತ್ತವೆ. ಬಹುಪಾಲು ಐತಿಹ್ಯಗಳು ಪ್ರಕೃತಿಯಲ್ಲಿ ಕಂಡುಬರುವ ಬಗೆಬಗೆಯ ವೈಚಿತ್ರ್ಯಗಳಿಗೆ ಕೊಡುವ ವಿವರಣೆಗಳಾಗಿರುತ್ತವೆ. ಅಲ್ಲದೆ ವ್ಯಕ್ತಿಗಳನ್ನು ಕುರಿತಾದ ಐತಿಹ್ಯಗಳೂ ಕಂಡುಬರುತ್ತವೆ. ಆ ವ್ಯಕ್ತಿಗಳು ಐತಿಹಾಸಿಕ ವ್ಯಕ್ತಿಗಳಾಗಿರಬಹುದು, ಇಲ್ಲವೆ ಪೌರಾಣಿಕ ವ್ಯಕ್ತಿಗಳಾಗಿರಬಹುದು. ಐತಿಹ್ಯಗಳನ್ನು 1 ಸ್ಥಳೀಯ ಐತಿಹ್ಯ ಮತ್ತು 2 ಸಂಚಾರಿ ಐತಿಹ್ಯ ಎಂದು ಎರಡು ವಿಭಾಗಗಳಾಗಿ ವಿಂಗಡಿಸಿದ್ದಾರೆ.

ಐತಿಹ್ಯಗಳಂತೆಯೇ ಕಂಡುಬಂದರೂ ಪುರಾಣಗಳಿಗೆ ದೇವರ ಇಲ್ಲವೆ ಧರ್ಮದ ಸೋಂಕಿರುತ್ತದೆ.

ಭೌತಿಕ ಸಾಮಗ್ರಿಗಳು: ಜನಪದ ನೃತ್ಯ, ನಂಬಿಕೆ, ಮೂಢನಂಬಿಕೆ, ಹಬ್ಬ ಹರಿದಿನ, ವೈದ್ಯ, ಆಚರಣೆ, ಮಾಟ, ಮಂತ್ರವಿದ್ಯೆ, ಉಡಿಗೆತೊಡಿಗೆ, ಕಲೆ ಇತ್ಯಾದಿಗಳು ಈ ವರ್ಗದಲ್ಲಿ ಬರುತ್ತವೆ.

ನೃತ್ಯ, ಮನುಷ್ಯ ತನಗುಂಟಾದ ಅನುಭವಗಳನ್ನು ಅಭಿವ್ಯಕ್ತಿಪಡಿಸುವ ಒಂದು ವಿಧಾನ. ಜನಪದ ನೃತ್ಯಗಳನ್ನು ಎರಡು ದೃಷ್ಟಿಗಳಿಂದ ನೋಡಬಹುದು: 1 ಅವರು ಸ್ವಸಂತೋಷಕ್ಕಾಗಿ ಮಾಡುವಂಥವು. 2 ಹಬ್ಬ, ಉತ್ಸವ ಇಂಥ ವಿಶೇಷ ಧಾರ್ಮಿಕ ಸಂದರ್ಭಗಳಲ್ಲಿ ಮಾಡುವಂಥವು. ಪ್ರತಿಯೊಂದು ದೇಶ, ಜನಾಂಗಗಳೂ ತಮ್ಮದೇ ಆದ ನೃತ್ಯ ವೈಶಿಷ್ಟಗಳನ್ನು ಹೊಂದಿರುತ್ತವೆ. ನೃತ್ಯಗಳಲ್ಲಿ ವೃತ್ತ್ತಿಗೆ ಸಂಬಂಧಪಟ್ಟ ನೃತ್ಯಗಳು ಧಾರ್ಮಿಕ ನೃತ್ಯಗಳು, ಯುದ್ಧ ನೃತ್ಯಗಳು, ಬೇಟೆಯಾಡುವ ನೃತ್ಯಗಳು, ಸತ್ತವರನ್ನು ಹೂಳುವ ಸಂದರ್ಭಗಳಲ್ಲಿ ಅಭಿನಯಿಸುವ ನೃತ್ಯಗಳು- ಈ ರೀತಿ ಅನೇಕ ಬಗೆಯ ನೃತ್ಯಗಳು ಪ್ರಚಾರದಲ್ಲಿವೆ. ಆಫ್ರಿಕದ ನೀಗ್ರೋ ಜನಾಂಗದ ಚಿನ್ನದ ಕರೆ (ಗೋಲ್ಡ್ ಕೋಸ್ಟ್) ಮತ್ತು ದಂತದ ಕರೆ (ಐವರಿ ಕೋಸ್ಟ್) ಎಂಬವು ನೃತ್ಯಗಾರರ ನೃತ್ಯ ಎಂದು ಹೆಸರುವಾಸಿಯಾಗಿವೆ. ಅನೇಕ ಸಲ ಕರ್ನಾಟಕದಲ್ಲಿಯೂ ಕೋಲಾಟ, ವೀರಗಾಸೆ, ಈರಮಕ್ಕಳ ಕುಣಿತ, ಡೊಳ್ಳಿನ ಕುಣಿತ, ಭೂತನೃತ್ಯ, ಬೀಸುಕಂಸಾಳೆ- ಈ ರೀತಿ ಬೇರೆ ಬೇರೆ ಬಗೆಯ ನೃತ್ಯಗಳಿವೆ.

ನಂಬಿಕೆ, ಮನುಷ್ಯ ಬದುಕಲು ಅನಿವಾರ್ಯವಾಗಿ ಬೇಕಾದ ಒಂದು ಮಾನಸಿಕ ಬಲ. ಆದಿಮಾನವ ಪ್ರಕೃತಿಯ ವೈಚಿತ್ರ್ಯಗಳನ್ನು ಕಂಡು, ಅವು ತನಗಿಂತ ದೊಡ್ಡವು ಎಂದು, ಅವಕ್ಕೆ ಹೆದರಿ ಶರಣಾದ. ತನಗೆ ಉಚಿತವಾಗಿ ಸಿಗುತ್ತ್ತಿದ್ದ ಗಾಳಿ, ನೀರು, ಬೆಳಕು, ಬೆಂಕಿ ಇವನ್ನೆಲ್ಲ ತನಗೆ ಕೊಡುವವನೊಬ್ಬ ಇದ್ದಾನೆಂದು ಸಮಾಧಾನ ತಂದುಕೊಂಡ. ಆ ಶಕ್ತಿಗಳಿಗೆ ಮತ್ತು ಆ ದೈವಕ್ಕೆ ಭಯಭಕ್ತಿಯಿಂದ ನಡೆದುಕೊಂಡರೆ ತನಗೆ ಯಾವ ತೊಂದರೆಯೂ ಆಗುವುದಿಲ್ಲವೆಂದು ನಂಬಿದ. ಆ ನಂಬಿಕೆ ಅವನ ಕಷ್ಟಗಳಿಗೆ ಪರಿಹಾರವೂ ಆಗಿತ್ತು. ಇಂದೂ ಜನಪದದಲ್ಲಿ ಬಲವಾಗಿ ಬೇರೂರಿರುವ ನಂಬಿಕೆಗಳ ಮೂಲ ಭಾವ ಇದೇ ಆಗಿದೆ. ಪ್ರಾರಂಭದಲ್ಲಿ ನಂಬಿಕೆಗಳು ಸಾಮಾನ್ಯವಾಗಿ ವೈಜ್ಞಾನಿಕ ಹಿನ್ನೆಲೆಯಲ್ಲಿ ಹುಟ್ಟಿಕೊಳ್ಳುತ್ತವೆ. ಕಾಲಕ್ರಮೇಣ ಪ್ರತಿಯೊಂದು ನಂಬಿಕೆಯ ಹಿಂದಿರುವ ವೈಜ್ಞಾನಿಕ ದೃಷ್ಟಿಮರೆತು, ನಂಬಿಕೆಗಳು ಕೇವಲ ಅಂಧಾನುಕರಣೆಗಾಗಿ ಉಳಿದುಕೊಳ್ಳುತ್ತವೆ. ವೈಜ್ಞಾನಿಕ ಹಿನ್ನೆಲೆಗಳನ್ನು ಕಳೆದುಕೊಂಡ ನಂಬಿಕೆಗಳೇ ಮೂಢನಂಬಿಕೆಗಳು. ಅವುಗಳಲ್ಲಿ ಎರಡು ವಿಧ. 1 ಪಳೆಯುಳಿಕೆಗಳು ಮತ್ತು 2 ಪುನಃ ಸೃಷ್ಟಿಗೊಂಡವು. ಜನತೆ ವಿದ್ಯಾವಂತವಾಗುತ್ತ ಹೋದಹಾಗೆಲ್ಲ ಮೂಢನಂಬಿಕೆಗಳು ಕಡಿಮೆಯಾಗುತ್ತವೆ. ಇಂಥ ಮೂಢನಂಬಿಕೆಗಳಿಂದ ಜನರಿಗೆ ಆಗಿರುವ, ಆಗುತ್ತಿರುವ ಹಾನಿ ಅಪಾರ.

ವೈದ್ಯಶಾಸ್ತ್ರ ಮೊದಮೊದಲು ಮಂತ್ರವಿದ್ಯೆಯ (ಮ್ಯಾಜಿಕ್) ಒಂದು ಅಂಗವಾಗಿತ್ತು. ದೆವ್ವ, ಗಾಳಿ, ಇಂಥ ಶಕ್ತಿಗಳು ವೈದ್ಯಶಾಸ್ತ್ರದಲ್ಲಿ ಅಗ್ರಸ್ಥಾನ ಪಡೆದಿದ್ದವು. ಆದರೆ ಕ್ರಿ.ಪೂ.2500ರಲ್ಲಿ ಪ್ರಾಚೀನ ಈಜಿಪ್ಟಿನಲ್ಲಿ ರಚಿತವಾದದ್ದೆಂದು ಹೇಳಲಾದ ಶಸ್ತ್ರಕ್ರಿಯಾ ಶಾಸ್ತ್ರವೊಂದರಲ್ಲಿ 48 ಬಗೆಯ ಶಸ್ತ್ರಚಿಕಿತ್ಸಾ ಕ್ರಮಗಳನ್ನು ಹೇಳಿದೆ. ಅವುಗಳಲ್ಲಿ ಕೇವಲ ಒಂದು ಮಾತ್ರ ಮಂತ್ರವಿದ್ಯೆಯನ್ನು ಕುರಿತದ್ದಾಗಿದೆ. ಗ್ರೀಕ್ ಪುರಾಣಗಳಲ್ಲಿ ಪ್ರಾಣಿಗಳು ರೋಗವನ್ನು ತರುವವುಗಳಾದರೆ ಗಿಡಗಳು ರೋಗಗಳನ್ನು ಹೋಗಲಾಡಿಸುವುವು ಎಂಬ ರೀತಿಯಲ್ಲಿ ಹೇಳಲಾಗಿದೆ. ಭಾರತದಲ್ಲಿ ಧನ್ವಂತರಿ ಎಂಬ ದೇವತೆ ರೋಗಗಳನ್ನು ಗುಣಪಡಿಸುವ ದೇವತೆಯಾಗಿದ್ದಾನೆ.

ಆಚರಣೆಗಳು ಸಾಮಾನ್ಯವಾಗಿ ಧಾರ್ಮಿಕ ಸೋಂಕನ್ನು ಹೊಂದಿಯೇ ಇರುತ್ತವೆ. ಯಾವುದಾದರೊಂದು ಬಗೆಯ ಆಚರಣೆ ಇಲ್ಲವೆ ಧಾರ್ಮಿಕ ಪೂಜೆಗಳು ಪೂರ್ಣವಾಗುವುದಿಲ್ಲ. ಹಬ್ಬಹರಿದಿನಗಳಲ್ಲಿ ನಡೆಯುವ ಒಂದೆರಡು ಘಟನೆಗಳು (ಉದಾ: ಬಲಿಕೊಡುವುದು) ಆಚರಣೆಗಳಾದರೆ ಹಬ್ಬ ಇಡಿಯಾಗಿ ಒಂದು ಆಚರಣೆ ಎನಿಸುತ್ತದೆ. ಆಚರಣೆಯ ಹಿಂದೆಯೂ ಸಾಕಷ್ಟು ಮೂಢನಂಬಿಕೆಗಳು ಬೇರುಬಿಟ್ಟಿರುತ್ತವೆ. ಅನಕ್ಷರಸ್ಥ ಸಮಾಜದಲ್ಲಿ ಇವುಗಳ ಹಾವಳಿ ಹೆಚ್ಚು.

ತನ್ನ ಬಿಡುವಿನ ವೇಳೆಗಳಲ್ಲಿ ಆನಂದವನ್ನು ಹೊಂದಲು ಮನುಷ್ಯ ಸಾಮಾನ್ಯವಾಗಿ ಹಬ್ಬಗಳನ್ನು ಆಚರಿಸುತ್ತಾನೆ. ಅವು ಸಾಮಾಜಿಕ ಸಂಘಟನೆಯ ಒಂದು ಅಂಗವೂ ಆಗಿವೆ. ನಾನಾ ಬಗೆಯ ಹಬ್ಬಗಳನ್ನು ಇಂದು ನಾವು ಆಚರಿಸುತ್ತಿದ್ದೇವೆ: 1 ಪ್ರಕೃತಿಗೆ ಸಂಬಂಧಿಸಿದವು-ಸಂಕ್ರಾಂತಿ, ಯುಗಾದಿ, 2 ದೇವತೆಗಳಿಗೆ ಸಂಬಂಧಿಸಿದವು_ಶಿವರಾತ್ರಿ, ಗೌರಿಹಬ್ಬ, 3 ವ್ಯಕ್ತಿಗಳಿಗೆ ಸಂಬಂಧಿಸಿದವು-ಕ್ರಿಸ್‍ಮಸ್, ಬಲಿಪಾಡ್ಯಮಿ, ಶ್ರೀರಾಮನವಮಿ, ವಿಜಯದಶಮಿ, 4 ಪ್ರಾಣಿಗಳಿಗೆ ಸಂಬಂಧಿಸಿದವು-ನಾಗರಪಂಚಮಿ.
ಎಲ್ಲ ಹಬ್ಬಗಳೂ ಸಾಮಾನ್ಯವಾಗಿ ಧಾರ್ಮಿಕ ಆಚರಣೆಗಳನ್ನು ಒಳಗೊಂಡಿರುತ್ತವೆ.

ಅತಿಮಾನುಷ ಶಕ್ತಿಗಳನ್ನು ವಶಪಡಿಸಿಕೊಂಡು ಅವುಗಳ ಸಹಾಯದಿಂದ ಅತಿ ಮಾನುಷವಾದ ಕೆಲಸಗಳನ್ನು ಮಾಡುವುದೇ ಮಂತ್ರವಿದ್ಯೆ. ಇದು ಮೂಢನಂಬಿಕೆ ಮತ್ತು ಮಾಟಗಳಿಗೆ ಸಂಬಂಧಿಸಿದ್ದು. ಮಾನವ ಇತಿಹಾಸದಲ್ಲಿ ಒಂದು ಕಾಲಕ್ಕೆ ಈ ವಿದ್ಯೆ ವಿಜ್ಞಾನದ ಒಂದು ಭಾಗವಾಗಿತ್ತು. ಇದರ ಹುಟ್ಟಿಗೆ ಎರಡು ಪ್ರಮುಖ ಕಾರಣಗಳನ್ನು ಹೇಳುತ್ತಾರೆ. 1 ಪ್ರಯೋಜನಾರ್ಥಕ ಮಂತ್ರ ವಿದ್ಯೆ-ವ್ಯಕ್ತಿ ತನ್ನ ಒಳಿತಿಗೋಸ್ಕರ ಇನ್ನೊಬ್ಬರ ಮೇಲೆ ಮಂತ್ರ ಕಟ್ಟಿಸುವುದು, 2 ನೇತೃರ್ಥಕ ಮಂತ್ರವಿದ್ಯೆ-ಗಾಳಿ, ದೆವ್ವ, ಮಾಟ ಇತ್ಯಾದಿಗಳನ್ನು ತಡೆಯುವುದಕ್ಕಾಗಿ ಆಚರಿಸುವುದು. 1 ಬಿಳಿ ಮಂತ್ರವಿದ್ಯೆ-ಕೆಟ್ಟ ಶಕ್ತಿಗಳನ್ನು ಆಹ್ವಾನಿಸದೆ ತೊಂದರೆಗಳನ್ನು ನಿವಾರಿಸಿಕೊಳ್ಳುವುದು. ಜ್ಯೋತಿಷ್ಯಶಾಸ್ತ್ರ ಈ ವಿಧಾನಕ್ಕೆ ಸೇರಿದುದಾಗಿದೆ; 2 ಕಪ್ಪು ಮಂತ್ರವಿದ್ಯೆ-ಇನ್ನೊಬ್ಬರ ಸಾವು, ನೋವು, ಅನಾರೋಗ್ಯ ಇವುಗಳನ್ನೇ ಉದ್ದೇಶವಾಗಿಟ್ಟುಕೊಂಡು ಆಚರಿಸುವಂಥದು - ಹೀಗೆ ಇನ್ನೊಂದು ಬಗೆಯಲ್ಲೂ ಮಂತ್ರವಿದ್ಯೆಯನ್ನು ವಿಂಗಡಿಸುತ್ತಾರೆ.

ಇವಲ್ಲದೆ ಜಾನಪದ ಒಳಗೊಳ್ಳುವ ಪ್ರಕಾರಗಳು ಅನೇಕವಾಗಿವೆ. ಹಳ್ಳಿಗಳಲ್ಲಿ ಮನೆಕಟ್ಟುವ ಕಲೆಯನ್ನು ತಂದೆ ಮಗನಿಗೆ ಬಾಯಿ ಮೂಲಕ ಹೇಳಿಕೊಡುವುದು; ವ್ಯವಸಾಯ ವಿಧಾನವನ್ನು ರೈತ ತನ್ನ ಮಗನಿಗೆ ಕಲಿಸುವುದು; ಕೈಕೆಲಸಗಳನ್ನು ಸಾಂಪ್ರದಾಯಕವಾಗಿ ಒಬ್ಬರು ಇನ್ನೊಬ್ಬರಿಂದ ಕಲಿತುಕೊಳ್ಳುವುದು, ದೋಣಿ ಕಟ್ಟುವುದನ್ನು ಸಾಂಪ್ರದಾಯಿಕವಾಗಿ ಕಲಿತುಕೊಳ್ಳುವುದು, ಸಾಂಪ್ರದಾಯಿಕ ಉಡಿಗೆತೊಡಿಗೆ ಆಟಗಳು ಇಂಥವೆಲ್ಲ ಜಾನಪದ ಭೌತಿಕ ಸಾಮಗ್ರಿಗಳ ಗುಂಪಿಗೆ ಸೇರುತ್ತವೆ. ಸಂಪ್ರದಾಯದ ಹಿನ್ನೆಲೆಯಲ್ಲಿ ಬೆಳೆದು, ಜನಪದದ ಸೃಷ್ಟಿಯಾಗಿ, ಜನಾಂಗದಿಂದ ಜನಾಂಗಕ್ಕೆ ಕಂಠಪಾಠದ ಮೂಲಕ ಬರುವ ಯಾವುದೇ ಸಂಪ್ರದಾಯ ಜಾನಪದವಾಗುತ್ತದೆ. ಜಾನಪದಕ್ಕೆ ಕಳೆದ ಶತಮಾನದಲ್ಲಿ ಒಂದು ಸ್ವತಂತ್ರ ಅಸ್ತಿತ್ವ ಬಂದ ಮೇಲೆ ಜಾನಪದದ ಎಲ್ಲ ಬಗೆಯ ಸಾಮಗ್ರಿಗಳನ್ನೂ ಸಾಧ್ಯವಾದಷ್ಟೂ ಅಚ್ಚಿನಲ್ಲಿ ಹಿಡಿದಿಡುವ ಕಾರ್ಯ ನಡೆದಿದೆ. ಈಗಾಗಲೇ ಪೋಲಂಡ್, ಜರ್ಮನಿ, ಇಂಗ್ಲೆಂಡ್, ಹಂಗರಿ, ಆಸ್ಟ್ರಿಯ, ಜಪಾನ್, ಚೀನ, ಅಮೆರಿಕ, ಸೋವಿಯೆತ್ ದೇಶ ಮುಂತಾದ ರಾಷ್ಟ್ರಗಳಲ್ಲಿ ಅಪಾರವಾಗಿ ಜಾನಪದವನ್ನು ಸಂಗ್ರಹ ಮಾಡಲಾಗಿದೆ. ಅನೇಕ ಜಾನಪದ ವಸ್ತು ಸಂಗ್ರಹಾಲಯಗಳು ಅಸ್ತಿತ್ವಕ್ಕೆ ಬಂದಿವೆ. ಭಾರತದಲ್ಲಿ ದೇಶೀಯ ಭಾಷೆಗಳ ಜನಪದ ಸಾಹಿತ್ಯವನ್ನು ಸಂಗ್ರಹಿಸಲಾಗುತ್ತದೆ. ಆದರೆ, ಸಾಹಿತ್ಯ ಸಂಗ್ರಹ ಸಾಕಷ್ಟು ಶಾಸ್ತ್ರೀಯವಾಗಿ ಆಗಿಲ್ಲ. ಕರ್ನಾಟಕದಲ್ಲೂ ಶಾಸ್ತ್ರೀಯ ಜಾನಪದ ಸಂಗ್ರಹ ಈಗೀಗ ಆರಂಭವಾಗುವ ಚಿಹ್ನೆಗಳು ಕಂಡುಬರುತ್ತಿವೆ.

ಇದುವರೆಗೆ ಸಾಂಪ್ರದಾಯಿಕವಾಗಿ ಬೆಳೆದು ಉಳಿದು ಬಂದ ಜಾನಪದವನ್ನು ಸಂಗ್ರಹಿಸಿಬಿಟ್ಟರೆ, ಅದರ ಜಾಯಮಾನ ಮುಗಿಯಿತೇನೋ ಅನ್ನಿಸುತ್ತದೆ. ನಾಗರಿಕತೆ ವೇಗವಾಗಿ ಹಬ್ಬುತ್ತಿರುವ ಈ ಕಾಲದಲ್ಲಿ, ಇಂದು ತಯಾರಿಸಿದ ವಸ್ತು ನಾಳೆ ಹಳೆಯದಾಗುತ್ತಿರುವಾಗ ಇನ್ನು ಮುಂದೂ ಜಾನಪದ ಉಳಿಯಬಲ್ಲುದೆ ಎಂಬ ಸಂಶಯ ಬರುತ್ತದೆ. ತಲತಲಾಂತರದಿಂದ ಉಳಿದುಬಂದ ಜಾನಪದ ಇನ್ನು ಮುಂದೆ ಹಿಂದೆ ಇದ್ದಷ್ಟು ಶಕ್ತಿಯುತವಾಗಿ ಬದುಕಲಾರದು. ಆಧುನಿಕ ಸೌಕರ್ಯಗಳನ್ನೊಳಗೊಂಡ ಸಲಕರಣೆಗಳು ಹೊರಬರುತ್ತಿರುವಾಗ ಜಾನಪದ ಸಾಮಗ್ರಿಗಳು ಅವುಗಳ ಮುಂದೆ ಪೈಪೋಟಿ ಮಾಡಿ ನಿಲ್ಲಲಾರವು. ಆದರೂ ಮನುಷ್ಯ ಸಂಘಜೀವಿಯಾಗಿ ಬದುಕಿರುವವರೆಗೆ ಜಾನಪದ ಉಳಿದೇ ತೀರುವುದು. ನಾಗರಿಕತೆ ತೀವ್ರವಾಗಿ ಬೆಳೆದಂತೆಲ್ಲ ಜಾನಪದ ಹೊಸಸ್ವರೂಪವನ್ನು ಪಡೆಯುತ್ತದೆ. ದೊಡ್ಡ ದೊಡ್ಡ ಪಾಶ್ಚಾತ್ಯ ನಗರಗಳಲ್ಲಿ ಕೈಗಾರಿಕಾ ಜಾನಪದ, ಕಾಲೇಜು ಜಾನಪದ ಎಂಬ ಬೇರೆ ಬೇರೆ ಪ್ರಕಾರಗಳು ಕಂಡುಬರುತ್ತಿವೆ. ಶಿಕ್ಷಣಪ್ರಸಾರ ಹೆಚ್ಚಿದಂತೆಲ್ಲ ಜಾನಪದದ ಮಹತ್ವ ಕಡಿಮೆಯಾಗುತ್ತ ಹೋಗುತ್ತದೆ. ಆದರೆ ಅದು ನಶಿಸಿಯೇ ಹೋಗಲಾರದು. ಎಂದಿನವರೆಗೆ ಮನುಷ್ಯ ಪ್ರಕೃತಿಯೊಡನೆ ಮತ್ತು ತನ್ನ ಸುತ್ತಲ ಸಮಾಜದೊಡನೆ ಅರ್ಥಪೂರ್ಣ ಸಂಬಂಧ ಇಟ್ಟುಕೊಳ್ಳುವನೋ ಅಲ್ಲಿಯವರೆಗೂ ಜಾನಪದ ಅಸ್ತಿತ್ವದಲ್ಲಿದ್ದು ಬೆಳೆಯುತ್ತಿರುತ್ತದೆ, ಉಳಿದೂ ಬರುತ್ತದೆ.														(ಎಚ್.ಡಿ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ